ಜ್ಯೋತಿ ಬೆಳಗುತಿದೆ ನಿರ್ಮಲ ಪರಂ [Jyothi belagutide nirmala param] - ಮಂಗಳಾರತಿ ಪದ

ಜ್ಯೋತಿ ಬೆಳಗುತಿದೆ ನಿರ್ಮಲ ಪರಂ
ಜ್ಯೋತಿ ಬೆಳಗುತಿದೆ
ಮಾತುಮನಂಗಳಿಂದತ್ತತ್ತ ಮೀರಿದ
ಸಾತಿಶಯದ ನಿರುಪಾಧಿಕ ನಿರ್ಮಲ ||ಪ||

ಶಿವಧರ್ಮನಾಳವೆಂತೆಂಬ ಕಂಬದಮೇಲೆ
ಸುವಿವೇಕ ಹೃದಯಾಬ್ಬ ಪ್ರಣತೆಯೊಳು
ಸವೆಯದ ಸದ್ಭಕ್ತಿ ರಸತೈಲ ತೀವಿದ
ಪ್ರವಿಮಲ ಕಳೆಯೆಂಬ ಬತ್ತಿವಿಡಿದು ದಿವ್ಯ ||೧||

ಮುಸುಕಿದ ವಿಷಯ ಪತಂಗ ಬಿದ್ದುರುಳೇ ತಾ-
ಮಸಬುದ್ಧಿಯೆಂಬ ಕತ್ತಲೆಯಳಿಯೇ
ಮಸಗಿ ಸುಜ್ಞಾನವೆಂತೆಂಬ ಮಹಾಪ್ರಭೆ
ಪಸರಿಸಿ ಮಾಯಾಕಾಳಿಕೆ ಮೊರ್ದದನುಪಮ ||೨||

ಪ್ರಣವಾಕಾರದ ಗುಣಮೂರು ಮುಟ್ಟದೆ
ಗಣನೆಗತೀತಾರ್ಥವೆನೆ ತೋರುವಾ
ಅಣುಮಾತ್ರ ಚಲನೆಯಿಲ್ಲದ ಮೋಕ್ಷಚಿಂತಾ-
ಮಣಿಯೆನಿಸುವ ಶಂಭುಲಿಂಗವೇ ತಾನಾದ ||೩||

- ನಿಜಗುಣ ಶಿವಯೋಗಿಗಳು

ಕಾಮೆಂಟ್‌ಗಳು